Wednesday, January 30, 2019

ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು !

ಓಂ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋಃ ನಮಃ

ಯಾವಯಾವ ಸಂದರ್ಭಗಳಲ್ಲಿ
ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು !

ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣರೇ ಮೊದಲಾದ ಗುರು-ಹಿರಿಯರಿಗೆ ನಮಸ್ಕಾರ ಮಾಡಬಾರದು. ಇದು ಯಾವ ಸಂದರ್ಭದಲ್ಲಿ ಎಂದರೆ

ವಿಪ್ರಂ ಸ್ನಾನಂ ಪ್ರಕುರ್ವಂತಂ ಸಮಿತ್ಕುಶಕರಂ ತಥಾ |
ಉದಪಾತ್ರಂಧರಂ ಚೈವ ಭುಂಜಂತಂ ನಾಭಿವಾದಯೇತ್ ||
ದೂರಸ್ಥಂ ಜಲಮಧ್ಯಸ್ಥಂ ಧಾವಂತಂ ಮದಗರ್ವಿತಂ |
ಕ್ರೋಧವಂತಂ ವಿಜಾನೀಯಾತ್ ನಮಸ್ಕಾರಂ ಚ ವರ್ಜಯೇತ್ ||

ಅಂದರೆ ಬ್ರಾಹ್ಮಣರು ಸ್ನಾನ ಮಾಡುತ್ತಿರುವಾಗ, ಶ್ರಾದ್ಧ ಮಾಡುತ್ತಿರುವಾಗ, ನೀರನ್ನು ಹೊತ್ತು ತರುತ್ತಿರುವಾಗ, ಊಟ ಮಾಡುತ್ತಿರುವಾಗ, ದೂರದಲ್ಲಿರುವಾಗ, ನೀರಿನ ಮಧ್ಯದಲ್ಲಿರುವಾಗ, ಅವಸರದ ಕಾರ್ಯದಲ್ಲಿರುವಾಗ, ಕೋಪಾವಿಷ್ಟನಾಗಿರುವಾಗ ನಮಸ್ಕರಿಸಬಾರದು.

ಅದರಲ್ಲೂ ಕೋಪಾವಿಷ್ಟನಾಗಿರುವಾಗ ಮಾತ್ರ ಅವಶ್ಯವಾಗಿ ನಮಸ್ಕರಿಸಲೇಬಾರದು. ಎಕೆಂದರೆ ಆಗ ಅನುಗ್ರಹಕ್ಕಿಂತ ಅವಗ್ರಹದ ಫಲವೇ ದೊರಕುವ ಸಾಧ್ಯತೆಯಿರುತ್ತದೆ. ಆದುದರಿಂದ ಇಂತಹ ಸಂದರ್ಭದಲ್ಲಿ ಯಾರೇ ಇರಲಿ ನಮಸ್ಕರಿಸಬಾರದು.

ಇಷ್ಟೇ ಅಲ್ಲದೇ!

ಸಭಾಯಾಂ ಯಜ್ಞಶಾಲಾಯಾಂ ದೇವಾಯತನೇಷು ಚ |
ಪ್ರತ್ಯೇಕಂ ತು ನಮಸ್ಕಾರೇ ಹಂತಿ ಪುಣ್ಯಂ ಪುರಾಕೃತಂ ||

ಸಭೆಯಲ್ಲಿ, ಯಜ್ಞ ಶಾಲೆಯಲ್ಲಿ, ದೇವಾಲಯಗಳಲ್ಲಿ ಪ್ರತ್ಯೇಕವಾಗಿ ನಿಮ್ಮ ಗುರುಗಳಿಗೆ ನಮಸ್ಕಾರ ಮಾಡಬಾರದು. ಎಕೆಂದರೆ ಸಭೆಯಲ್ಲಿ ಅನೇಕ ಪಂಡಿತರು, ಜ್ಞಾನಿಗಳು ಸೇರಿರುತ್ತಾರೆ. ಆ ಸಂದರ್ಭದಲ್ಲಿ ಅವರ ಮಧ್ಯೆಯಿರುವ ನಿಮ್ಮ ಗುರುಗಳಿಗೆ ಮಾತ್ರ ನಮಸ್ಕರಿಸಿದರೆ ಉಳಿದ ಗುರುಗಳನ್ನು, ಜ್ಞಾನಿಗಳನ್ನು ತಿರಸ್ಕರಿಸಿದಂತಾಗುತ್ತದೆ. ಆಗ ನಿಮ್ಮ ಗುರುಗಳಿಗೆ ನಮಸ್ಕರಿಸುವ ಆತುರದಲ್ಲಿ ನಾವು ಗಳಿಸುವ ಪುಣ್ಯ ಸಂಪಾದನೆಗಿಂತ ಪಾಪದ ಸಂಗ್ರಹವೇ ಹೆಚ್ಚಾದೀತು.!

 ಆದುದರಿಂದ ಸಭಾ ಮಧ್ಯದಲ್ಲಿರುವ ಗುರುಗಳಿಗೆ ಆಗಲೇ ನಮಸ್ಕರಿಸದೇ ಸಭೆ ಮುಗಿದ ನಂತರ ಏಕಾಂತದಲ್ಲಿ ನಮಸ್ಕರಿಸಬೇಕು. ಇದರಿಂದ ಯಾವುದೇ ರೀತಿಯ ಪ್ರಮಾದಕ್ಕೆ ಅವಕಾಶವಿಲ್ಲ.
ಕೃಪೆ:  ಕೃಷ್ಣಪ್ರಸನ್ನ ಆಚಾರ್ ದಾವಣಗೆರೆ

Friday, January 25, 2019

ಸೋಂದಾ ಕ್ಷೇತ್ರ: ಕ್ಷೇತ್ರಪರಿಚಯ

ಸೋಂದಾ ಕ್ಷೇತ್ರ

ಕ್ಷೇತ್ರಪರಿಚಯ

ಸೋಂದಾ ಕ್ಷೇತ್ರ ಬೆಂಗಳೂರಿನಿಂದ ಸುಮಾರು ನಾಲ್ಕುನೂರು ಕಿ.ಮೀ ದೂರದಲ್ಲಿ ನೆಲೆಸಿದೆ.

 ಶಿರಸಿ ಯಿಂದ ೩೫ ಕಿ.ಮೀ ದೂರ ಸಾಗಿದರೆ ಈ ಕ್ಷೇತ್ರ ಸಿಗುವುದು. ಸುತ್ತಲೂ ಹಸಿರು ಕಾಡು, ರಮ್ಯ ವಾತಾವರಣ ಸುಂದರವಾದ ಕೆರೆಯಿಂದ ಸದಾಕಾಲ ಭಕ್ತರನ್ನು ಆಕರ್ಷಿಸುತ್ತಿದೆ.

 ಈ ಕ್ಷೇತ್ರಕ್ಕೆ ಸೋಂದ, ಸೋದೆ, ಸ್ವಾದಿ ಎಂದು ಸಹ ಕರೆಯುತ್ತಾರೆ. ಹೆಚ್ಚಾಗಿ ಮಾಧ್ವ ಬ್ರಾಹ್ಮಣರು ಭೇಟಿ ಕೊಡುವ ಈ ಕ್ಷೇತ್ರದಲ್ಲಿ ವಾದಿರಾಜರ ಮೂಲ ಬೃಂದಾವನ, ರಮಾತ್ರಿವಿಕ್ರಮ ದೇವರ ಗುಡಿ, ಭೂತರಾಜರ ಸನ್ನಿಧಿ, ಧವಳ ಗಂಗಾ, ಮುಖ್ಯಪ್ರಾಣ ದೇವರು, ಗೋಪಾಲಕೃಷ್ಣ, ಸಂತಾನ ಗೋಪಾಲಕೃಷ್ಣ, ಅರಳಿಕಟ್ಟೆ, ನಾಗಬನ, ವೇದ ಮಂದಿರ, ಪಾಪ ವಿಮೋಚನಾ ತೀರ್ಥ, ಚಂದ್ರಮೌಳೇಶ್ವರ, ಹಾಗೂ ವೀಣೆಸಹಿತ ಹನುಮಂತ ದೇವರು ಇಲ್ಲಿ ನೆಲೆಸಿದ್ದಾರೆ.

ಆ ಜಾಗದಿಂದ ಸ್ವಲ್ಪ ದೂರ ಕಾಡಿನ ಹಾದಿಯಲ್ಲಿ ನಡೆದು ಸಾಗಿದರೆ ಶಾಲ್ಮಲಿ ನದಿ ಹರಿಯುವ ತಪೋವನ ಎಂಬ ಅದ್ಭುತವಾದ ಸ್ಥಳವಿದೆ.

ಮುಂಚೆ ಈ ಜಾಗಕ್ಕೆ ನಡೆದೇ ಹೋಗಬೇಕಿತ್ತು. ಇತ್ತೀಚಿಗೆ ವಾಹನ ವ್ಯವಸ್ಥೆಯನ್ನು ಸಹ ಮಾಡಿದ್ದರೆ. ಸೋಂದಾ ಕ್ಷೇತ್ರಕ್ಕೆ ಬರುವ ಬಹುಪಾಲು ಜನ ತಪೋವನಕ್ಕೆ ಖಂಡಿತವಾಗಿ ಭೇಟಿ ಕೊಡುವರು . ಹಾಗೆಯೇ ಸೋಂದಾ ಕ್ಷೇತ್ರದ ಸುತ್ತ ಮುತ್ತ ನೋಡಬಹುದಾದ ಜಾಗಗಳೆಂದರೆ ಸ್ವರ್ಣವಲ್ಲಿ ಮಠ, ವೆಂಕಟರಮಣ ದೇವಸ್ಥಾನ ಸಹ ಉಂಟು.

ಮಳೆಗಾಲದಲ್ಲಂತೂ ಇಲ್ಲಿನ ಸೌಂದರ್ಯ ವರ್ಣಿಸಲು ಪದಗಳು ಸಾಲದು. ಮಳೆಗಾಲದಲ್ಲಿ ವಾರಾಂತ್ಯಗಳು ಬಿಟ್ಟರೆ ವಾರದ ದಿನಗಳಲ್ಲಿ ಹೆಚ್ಚು ಜನಸಂದಣಿ ಇರುವುದಿಲ್ಲ.

ಪ್ರಶಾಂತವಾಗಿರುತ್ತದೆ ಸದಾಕಾಲ ಸುರಿಯುತ್ತಿರುವ ಆ ಮಳೆಯನ್ನೂ ನೋಡುವುದೇ ಕಣ್ಣಿಗೊಂದು ಹಬ್ಬ. ಆದರೆ ಒಂದೇ ಒಂದು ತೊಂದರೆ ಎಂದರೆ ಮಳೆಗಾಲದಲ್ಲಿ ತಪೋವನಕ್ಕೆ ಭೇಟಿ ಕೊಡಲು ಸಾಧ್ಯವಿಲ್ಲ. ಏಕೆಂದರೆ ಕಾಡಿನ ಹಾದಿಯಾದ್ದರಿಂದ ಜಿಗಣೆಗಳ ಕಾಟ ಹೆಚ್ಚಾಗಿ ಇರುತ್ತದೆ.

ಇನ್ನು ಈ ಕ್ಷೇತ್ರದ ಊಟದ ರುಚಿಯ ಬಗ್ಗೆಯಂತೂ ಎರಡು ಮಾತಿಲ್ಲ. ಬೇಸಿಗೆಯಲ್ಲಿ ಇಲ್ಲಿನ ವಿಶೇಷ ಹಲಸಿನಕಾಯಿ ಹುಳಿ ಮಳೆಗಾಲದಲ್ಲಿ ಮಂಗಳೂರು ಸೌತೆಕಾಯಿ ಹುಳಿ. ಆಹಾ ಆ ರುಚಿಯನ್ನು ಅನುಭವಿಸಿಯೇ ತೀರಬೇಕು.

ಕ್ಷೇತ್ರ ಮಹಿಮೆ

ಇಲ್ಲಿನ ಮುಖ್ಯ ದೇವರು ಶ್ರೀ ರಮಾತ್ರಿವಿಕ್ರಮ ದೇವರು, ಶ್ರೀ ವಾದಿರಾಜರು ಮತ್ತು ಶ್ರೀ ಭೂತರಾಜರು.

 ಶ್ರೀ ವಾದಿರಾಜರು ಯತಿಗಳು. ಅವರ ಮೂಲ ಬೃಂದಾವನ ಇಲ್ಲಿಯೇ ಇರುವುದು. ಪ್ರತಿನಿತ್ಯ ಪ್ರಾತಹ ಕಾಲದಲ್ಲಿ ಮತ್ತು ಸಂಧ್ಯಾಕಾಲದಲ್ಲಿ ಇಲ್ಲಿ ಪೂಜೆಗಳು ನಡೆಯುತ್ತವೆ.

ಭೂತರಾಜರು :

ಇಲ್ಲಿನ ವಿಶೇಷ ಪೂಜೆ ಎಂದರೆ ಭೂತರಾಜರಿಗೆ ಅನ್ನದ ಬಲಿ ಪೂಜೆ. ಬೇಸಿಗೆ ಕಾಲದಲ್ಲಿ ರಮಾತ್ರಿವಿಕ್ರಮ ದೇವಸ್ಥಾನದ ಮುಂಭಾಗದಲ್ಲಿ ಇರುವ ವಿಶೇಷ ಪೀಠದಲ್ಲಿ ಈ ಪೂಜೆ ನೆರವೇರಿಸಲಾಗುವುದು. ಮಳೆಗಾಲದಲ್ಲಿ ಅಲ್ಲಿ ನಡೆಸಲು ಆಗದ ಕಾರಣ ಭೂತರಾಜರ ಗುಡಿಯ ಮುಂದೆಯೇ ಮಾಡುತ್ತಾರೆ.


 ಎರಡು ಅಡಿಯಷ್ಟು ಎತ್ತರಕ್ಕೆ ಅನ್ನದ ರಾಶಿ ಹಾಕಿ ಅದಕ್ಕೆ ಕುಂಕುಮದ ನೀರನ್ನು ಕಲಸಿ ಅನ್ನದ ರಾಶಿಗೆ ಆ ನೀರನ್ನು ಹಾಕಿ ಕೆಂಪನೆ ಬಣ್ಣದ ರಾಶಿ ಮಾಡಿ ಅದಕ್ಕೆ ಒಡೆದ ತೆಂಗಿನ ಕಾಯಿಯನ್ನು ಕಣ್ಣಿನಂತೆ ಇತ್ತು ಅದಕ್ಕೊಂದು ರೂಪ ಕೊಟ್ಟು ಅದರ ಮುಂದೆ ಕುಳಿತು ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರದಲ್ಲಿ ಒಂದು ಪಂಜನ್ನು ಸಿದ್ಧಮಾಡಿ ಅದರಿಂದಲೇ ಆರತಿ ಮಾಡಿ ನಂತರ ಕಲಸಿದ್ದ ಕುಂಕುಮದ ನೀರನ್ನು ಆ ಪಂಜಿನ ಮೂಲಕ ನೆರೆದಿದ್ದ ಭಕ್ತರ ಮೇಲೆ ಪ್ರೋಕ್ಷಣೆ ಮಾಡುತ್ತಾರೆ. ನಂತರ ಅದೇ ನೀರನ್ನು ತೀರ್ಥವನ್ನಾಗಿ ನೀಡುತ್ತಾರೆ. ಪ್ರತಿದಿನವೂ ಈ ಪೂಜೆ ನಡೆದರೂ ಹುಣ್ಣಿಮೆಯಂದು ಬಹಳ ವಿಶೇಷ ಈ ಪೂಜೆಗೆ.

ಮುಂದು ವರೆಯುವದು....

ವಾದಿರಾಜ ಪಾಹಿಮಾಂ ಭೂತರಾಜ ರಕ್ಷಮಾಂ

ಶಂಖ - ಇತಿಹಾಸ ಮತ್ತು ಮಹತ್ವ

ಶಂಖ

ಪ್ರಾಚೀನ ಕಾಲದಿಂದಲೂ ಹಿಂದೂಗಳಿಗೆ ಅತ್ಯಂತ ಪೂಜನೀಯ ವಸ್ತು ಶಂಖ.

ಹಿಂದೂ ಪುರಾಣಗಳ ಪ್ರಕಾರ ಹದಿನೆಂಟುವಾದ್ಯಗಳಲ್ಲಿ ಶಂಖವಾದ್ಯವೂ ಒಂದು ಆದ್ದರಿಮದಲೇ ಇದನ್ನು ಊದುವುದಲ್ಲದೆ ಮನೆ ಹಾಗೂ ದೇವಸ್ಥಾನಗಳಲ್ಲಿ ದೇವರ ಅಭಿಷೇಕಕ್ಕೆ ಇದರ ಮೂಲಕವೇ ನೀರನ್ನು ಸುರಿಯಲಾಗುತ್ತದೆ.

ಮಹಾತ್ಮರು ರಾಜರು ದೇವದೇವತೆಗಳ ಜನನವನ್ನು ಹಿಂದೆ ಶಂಖನಾದದ ಮೂಲಕವೇ ಷೋಷಿಸುತ್ತಿದ್ದರು.

ಮಹರ್ಷಿಗಳು ಹಾಗೂ ಚಕ್ರವರ್ತಿಗಳ ಆಗಮವನ್ನು ಸೂಚಿಸಲೂ ಶಂಖವನ್ನು ಬಳಸಲಾಗುತ್ತಿತ್ತು. ಭಾರತದ ಕೆಲವು ಭಾಗಗಳಲ್ಲಿ ಕೆಲವು ಪಂಗಡದವರು ಶವದ ಅಂತಿಮಯಾತ್ರೆಯ ಸಮಯದಲ್ಲೂ ಶಂಖನಾದ ಮಾಡುವ ಪದ್ದತಿಯುಂಟು.

ತಂತಿವಾದ್ಯ, ಶಂಖ, ನಾದಸ್ವರ, ಕೊಂಬು ಹಾಗೂ ತಾಳ ಇವುಗಳಿಂದ ಹೊರಡುವ ಶಬ್ಧಗಳನ್ನು ಪಂಚಮಹಾಶಬ್ಧಗಳೆನ್ನುತ್ತಾರೆ.

ಮೂರರಿಂದ ಆರನೇ ಶತಮಾನದವರೆವಿಗೂ ಕೆಲವು ಚಕ್ರವರ್ತಿಗಳು ಪಂಚಮಹಾಶಬ್ದ ಎಂಬ ಬಿರುದುಗಳನ್ನುಗಳಿಸುತ್ತಿದ್ದರು ಕೆಲವು ರಾಜ್ರು ತಮ್ಮ ಕೈಕೆಳಗಿನ ಮಹಾವೀರರೂ ಅನುಯಾಯಿಗಳೂ ಆದವರಿಗೆ ಈ ಹೆಸರಿನ ಬಿರುದುಗಳನ್ನು ಕೊಡುತ್ತಿದ್ದರೆಂದು ಪ್ರಾಚೀನ ಬರಹಗಳಿಂದ ತಿಳಿದುಬರುತ್ತದೆ.

"ಶಂಖಂ ಚಂದ್ರಾರ್ಕ ದೈವತ್ವಂ
ಮಧ್ಯೇ ವರುಣದೈವತವೃಷ್ಟೇ ಪ್ರಜಾವತೆ ನತ್ಪಂ
ಏತತ್ ಶಂಖಂ ವ್ರವೂಜಯೇ"

ಎಂಬ ಶಂಖವನ್ನು ಪೂಜಿಸುವ ಶ್ಲೋಕ ಪೂಜೆಯಲ್ಲಿ ಶಂಖದ ಮಹತ್ವವನ್ನು ಸಾರುತ್ತದೆ.

 ಶಂಖಗಳಲ್ಲಿ ವಾಲಂಪುರಿ, ಇದಾಂಪುರಿ, ಚಾಲಂಕಾಲಮ್ ಹಾಗೂ ಪಾಂಚಜನ್ಯಂ ಎಂಬುದಾಗಿ ನಾಲ್ಕು ವಿಧಗಳಿವೆ.

ತಮಿಳುನಾಡಿದನ ಕೆಲವು ದೇವಸ್ಥಾನಗಳಲ್ಲಿ ಒಂದು ಸಾವಿರದೆಂಟು ಶಂಖಗಳಿದ್ದು ವಿಶೇಷ ಸಂಧರ್ಭಗಳಲ್ಲಿ ಈ ಎಲ್ಲ ಶಂಖಗಳಲ್ಲೂ ಪವಿತ್ರಗಂಗೆಯನ್ನಿಟ್ಟು ಮಹಾಶಂಖಾಭಿಷೇಕವನ್ನು ಮಾಡುತ್ತಾರೆ.

 ರಾಮಾಯಣ, ಮಹಾಭಾರತಗಳಲ್ಲೂ ಶಂಖದ ಪಾತ್ರ ಬಹಳ ಮುಖ್ಯವಾದುದು ಆಗಿನ ಕಾಲದಲ್ಲಿ ಪ್ರತಿಯೊಬ್ಬ ಪ್ರಮುಖನ ಬಳಿಯೂ ಒಂದೊಂದು ಶಂಖವಿದ್ದು ಅದಕ್ಕೆ ಪ್ರತ್ಯೇಕ ಹೆಸರಿರುತ್ತಿತ್ತು ಶ್ರೀಕೃಷ್ಣನ ಶಂಖದ ಹೆಸರು ಪಾಂಚಜನ್ಯ, ಅರ್ಜುನನದು ದೇವದತ್ತ, ಭೀಮನದು ಪೌಂಢ್ರ, ಯುಧಿಷ್ಠಿರನದು ಅನಂತವಿಜಯ, ನಕುಲನದು ಸುಘೋಶ, ಸಹದೇವನದು ಮಣೀಪುಷ್ಪಕ - ಹೀಗೆ
 ಮಹಾವಿಷ್ಣುವಿನ ಎಡಹಸ್ತದಲ್ಲಿ ಸದಾ ಶಂಖ ಶೋಭಿಸುತ್ತಿರುತ್ತದೆ.

 ಶ್ರೀ ವಿಷ್ಣುವನ್ನು ಶಂಖ ಚಕ್ರ ಗದಾ ಹಸ್ತ ಎಂದೇ ಶ್ಲೋಕಗಳು ವರ್ಣಿಸುತ್ತವೆ. ಕುಬೇರನ ಬಳಿಯಿದ್ದ ನವನಿಧಿಗಳಲ್ಲಿ ಅಕ್ಷಯವಾಗುತ್ತಿದ್ದ ನಿಧಿಯನ್ನು ಶಂಖನಿಧಿ ಎಂದೆನ್ನುತ್ತಾರೆ.

 ಕೆಲವು ಪ್ರಮುಖ ದೇವಾಯಲಗಳಲ್ಲಿ ಅವರದ್ದೇ ಪ್ರತ್ಯೇಕವಾದ ವಾದ್ಯ ವೃಂದವಿದ್ದು ಅವರಲ್ಲಿ ಶಂಖವಾದ್ಯಕ್ಕೆ ಪ್ರಮುಖ ಸ್ಥಾನವಿರುತ್ತದೆ ಅಂತಹ ಶಂಖಗಳನ್ನು ವಿಶೇಷರೀತಿಯಲ್ಲಿ ಅಲಂಕರಿಸುತ್ತಾರೆ.

 ಊದುವ ಭಾಗಕ್ಕೆ ಸಾಮಾನ್ಯವಾಗಿ ಬೆಳ್ಳಿಯ ತಗಡಿನ ನವಿಲುಗರಿಯ ರೂಪದ ಕೆತ್ತನೆಕೆಲಸವಿರುತ್ತದೆ. ಶಂಖವನ್ನು ಎರಡೂ ಕಡೆಯಿಂದ ಊದಬಹುದು. ಇದು ಬಹಳ ಪುರಾತನ ವಾದ್ಯವೇ ಆದರೂ ಕಲಿಯುವುದು ಬಹಳ ಕಷ್ಟ ಹಾಗೂ ಕಲಿಯಲು ಬಹಳ ಬಲವಿರಬೇಕೆಂಬ ಕಾರಣದಿಂದಲೋ ಏನೋ ಇದು ಜನಪ್ರಿಯವಾಗಿಲ್ಲ.

 ಇನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಶಂಖ ವಿಜ್ಞಾನಿಗಳ ಗಮನವನ್ನು ಬಹಳವಾಗಿ ಸೆಳೆದಿದೆ.

ಶಂಖವನ್ನು ಊದುವಾಗ ಅದೊರೊಳಗೆ ಪ್ರವೇಶಿಸುವ ಉಸಿರು ಶಂಖದೊಳಗಿನ ವಕ್ರದಾರಿಯನ್ನು ದಾಟಿ ಹೊರಬರುವಾಗ ತೀವ್ರವೇಗವುಳ್ಳದ್ದೂ ಹೆಚ್ಚು ಉಷ್ಣತೆಯುಳ್ಳದ್ದೂ ಆಗುವದೆಂದು ಪ್ರಯೋಗಗಳಿಂದ ಸಿದ್ಧವಾಗಿದೆ.

ಹೀಗೆ ಶಂಖದಿಂದ ಹೊರಬರುವ ಗಾಳಿಯ ಉಷ್ಣಾಂಶವು ನೂರಕ್ಕೆ ಎಂಟ್ರಷ್ಟಿದ್ದರೆ ಅದರ ಪ್ರಭಾವದಿಂದ ಹೊರಗಿನ ಗಾಳಿಯು ಒಂದು ಸೆಕೆಂಡಿಗೆ 8708ಅಡಿ ವೇಗದಿಂದ ಚಲಿಸುವುದೆಂದು ಪ್ರಯೋಗ ಫಲಿತಾಂಶಗಳು ತಿಳಿಸುತ್ತವೆ.

 ತತ್ಪರಿಣಾಮವಾಗಿ ವಾತಾವರಣದಲ್ಲಿನ ರೋಗಜನಕ ಕೀಟಾಣಿಗಳು ನಾಶವಾಗುವುದಲ್ಲದೆ ವಾತಾವರಣದಲ್ಲಿನ ತೇಜಸ್ಸತ್ಪದ ಪ್ರಮಾಣವೂ ಹೆಚ್ಚುವುದು.

 ಇಂತಹ ವಾತಾವರಣದಲ್ಲಿನ ವಾಯುವನ್ನು ಉಸಿರಾಡುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯೂ ಬೆಳೆಯುವುದು ಎಂದು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ.

 ಧನ್ವಂತರೀ ನಿಘಂಟಿನಲ್ಲೂ ಶಂಖದ ಗುಣವರ್ಣನೆ ಹೀಗಿದೆ.
ಶಂಖ ನಾದು ಕಟು ವಾಕೇ
ವಿಯೋಷ್ಣ ವ್ರಕೀರ್ತಿತ
ಪರಿಣಾಮ ಜಯೇತ್ ಶೂಲಂ
ಚಕ್ಷುಷಂ ರಕ್ತಪಿತ್ತಜಿತ

 ಶಂಖವು ರುಚಿಗೆ ಕಾರವೆನಿಸಿದರೂ ಜೀರ್ಣವಾದ ಮೇಲೆ ಮಧುರವಾಗಿರುವುದು ಅದು ಸಮುದ್ರದಲ್ಲಿ ಹುಟ್ಟಿದರೂ ಜೀರ್ಣಾಗ್ನಿಯನ್ನು ಪ್ರಜ್ವಲಿಸುವುದರಿಂದ ವಿಷ್ಣುವೀರ್ಯವೆಂದು ಹೇಳುತ್ತಾರೆ ಅದು ಹೊಟ್ಟೆ ನೋವು ಕಣ್ಣಿನ ರೋಗ ಹಾಗೂ ರಕ್ತಸ್ರಾವದ ಬೇನೆಯನ್ನು ಗುಣಪಡಿಸುತ್ತದೆ.

 ಶಂಖವನ್ನು ನೀರು ಜೇನುತುಪ್ಪ, ನಿಂಬೇರಸದಲ್ಲಿ ತೇಯ್ದು ತಿಂದರೆ ಅಮ್ಲಪಿತ್ತ ತಲೆತಿರುಗುವಿಕೆ ಮೊಡವೆ ಕುರು ಮುಂತಾದ ದೋಷಗಳ ನಿವಾರಣೆಯಾಗುವುದೆಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ.

 ವೇಗ ಮಾತುಬಾರದ ಮಕ್ಕಳಿಗೆ ಶಂಖದಲ್ಲಿಟ್ಟ ನೀರನ್ನು ಕುಡುಸುವುದುಂಟು, ಸ್ವರಮಂತ್ರ ದೋಷದಿಂದುಂಟಾದ ಮೂಕತನಕ್ಕೆ ರೋಗಿಯು ದಿನಾಲೂ ಕೆಲವು ಸಮಯದವರೆವಿಗೆ ಶಂಖವನ್ನು ಊದಬೇಕು ಇದರಿಂದ ಕಿವಿಡುತನವನ್ನು ಸಹ ನಿವಾರಿಸಬಹುದು.

ಉತ್ತರ ಪ್ರದೇಶದ ಕೆಲವೆಡೆಗಳಲ್ಲಿ ಮಾತು ಸರಿಯಾಗಿ ಬಾರದ ಮಕ್ಕಳಿಗೆ ಚಿಕ್ಕ ಶಂಖದ ಮಾಲೆಯನ್ನು ತೊಡಿಸುತ್ತಾರೆ.

 ಹೀಗೆ, ಶಂಖ ಪುರಾಣಗಳ ಕಾಲದಿಂದ ಇಂದಿನ ಕಾಲದವರೆವಿಗೂ ಪ್ರಸಿದ್ದವೂ ಉಪಯುಕ್ತವೂ ಪೂಜನೀಯವೂ ಆಗಿರುವ ಕೆಲವೇ ವಸ್ತುಗಳಲ್ಲೊಂದಾಗಿದೆ.

(ವಾಟ್ಸಪ್ ಕೃಪೆ)

Thursday, January 24, 2019

ದೇವರ್ಷಿ ನಾರದರ ಕುರಿತು...‘ನಾರದ’ ಅಂದರೆ ನಮ್ಮ ಅಂತರಂಗದ ಧ್ವನಿ.

 ಕೃಷ್ಣ ಹೇಳುತ್ತಾನೆ “ದೇವರ್ಷೀಣಾಂ ಚ ನಾರದಃ” ಎಂದು. ನಾರದ ಗಂಧರ್ವರಲ್ಲಿ ಒಬ್ಬ. ಆದರೆ ಭಗವಂತನ ವಿಶೇಷ ಸನ್ನಿಧಾನದಿಂದ ಆತ ತುಂಬಾ ಎತ್ತರಕ್ಕೇರಿ ದೇವರ್ಷಿಯಾದ.

ನಾರದ ಭಗವಂತನನ್ನು ಪಡೆದದ್ದು ಮಹಾ ಸಾಧನೆಯಿಂದ. ಹಿಂದಿನ ಬ್ರಹ್ಮಕಲ್ಪದಲ್ಲಿ ನಾರದ ಒಂದು ಬಡ ಕುಟುಂಬದಲ್ಲಿ ಹುಟ್ಟಿದ್ದ. ಆತನ ತಾಯಿ ಋಷಿ-ಮುನಿಗಳ ಆಶ್ರಮದಲ್ಲಿ ಕೆಲಸ ಮಾಡಿಕೊಂಡು ಬದುಕುತಿದ್ದಳು.

ಪುಟ್ಟ ಮಗುವಾಗಿದ್ದ ಈತ ಋಷಿಗಳ ಅಧ್ಯಾತ್ಮ ಸಂಭಾಷಣೆಯನ್ನು ಕೇಳುತ್ತ ಬೆಳೆದ. ಈತ ಐದು ವರ್ಷದವನಿದ್ದಾಗ ಆತನ ತಾಯಿ ಹಾವು ಕಚ್ಚಿ ಸಾಯುತ್ತಾಳೆ.

ತಿಳಿದವರು ಹೇಳುವಂತೆ- “ನಮಗೆ ದೇವರೇ ‘ನಾಥ’ ಎಂದು ಗೊತ್ತು ಮಾಡಿಸಲು  ಭಗವಂತ ನಮ್ಮನ್ನು ಮೊದಲು ‘ಅನಾಥ’ ಮಾಡುತ್ತಾನೆ”. ಹಾಗೆ ಅನಾಥನಾದ ಈತ  ತನ್ನ ಐದನೇ ವರ್ಷದಿಂದಲೇ, ಋಷಿಗಳಿಂದ ತಿಳಿದ ಜ್ಞಾನದಿಂದ ಸಾಧನೆ ಆರಂಭಿಸುತ್ತಾನೆ.

 ಆದರೆ ಆತನಿಗೆ ಆ ಜನ್ಮದಲ್ಲಿ ಭಗವಂತನ ದರ್ಶನವಾಗುವುದಿಲ್ಲ. ಆದರೆ ಆತ ಭಗವಂತನ ವಾಣಿಯನ್ನು ‘ಕೇಳಿದ’. “ಈ ಜನ್ಮದಲ್ಲಿ ನನ್ನನ್ನು ಕಾಣುವ ಪ್ರಯತ್ನ ಮಾಡಬೇಡ.

ನೀನು ಮುಂದಿನ ಕಲ್ಪದಲ್ಲಿ ಸದಾ ನನ್ನನ್ನು ಕಾಣುವೆ” ಎಂದು. ನಂತರ ಈತ ಈ ಬ್ರಹ್ಮಕಲ್ಪದಲ್ಲಿ ನಾರದನಾಗಿ ಹುಟ್ಟಿ ಭಗವಂತನ ಮಹಾ ಅನುಗ್ರಹಕ್ಕೆ ಪಾತ್ರನಾದ. ನಾರದರು ನಮ್ಮ ಅಂತಃಪ್ರಜ್ಞೆಯ ಅಭಿಮಾನಿ ದೇವತೆ.

ಹಿಂದಿನ ಕಾಲದ ಕಥೆಗಳಲ್ಲಿ ಕಾಣುವಂತೆ ಯಾವುದಾದರು ಒಳ್ಳೆಯ ಕೆಲಸವಾಗಬೇಕಾದರೆ ಅಲ್ಲಿ ನಾರದರು ಬಂದು ಹೇಳಿ ಹೋಗುತ್ತಿದ್ದರು. ಉದಾಹರಣೆಗೆ ವಾಲ್ಮೀಕಿ ರಾಮಾಯಣ ಬರೆಯುವಂತೆ ಹೇಳಿ ಹೋದವರು ನಾರದರು. ಇಲ್ಲಿ ನಮಗೆ ಒಂದು ಪ್ರಶ್ನೆ ಬರುತ್ತದೆ.

ಈಗ ಏಕೆ ನಾರದರು ಬರುವುದಿಲ್ಲ, ಏಕೆ ನಮಗೆ ಮಾರ್ಗದರ್ಶನ ಸಿಗುವುದಿಲ್ಲ ಎಂದು. ನಾರದರನ್ನು ನಾವು ಕರೆದರೆ ಖಂಡಿತ ಇವತ್ತಿಗೂ ಬರುತ್ತಾರೆ! 

‘ನಾರದ’ ಅಂದರೆ ನಮ್ಮ ಅಂತರಂಗದ ಧ್ವನಿ.

-ಸಂಗ್ರಹಿತ ಮಾಹಿತಿ

ಅಶ್ವತ ವೃಕ್ಷದ ಮಹತ್ವ

ಅಶ್ವತ್ಥಃ ಸರ್ವ ವೃಕ್ಷಾಣಾಮ್ ದೇವರ್ಷೀಣಾಮ್ ಚ ನಾರದಃ । ಗಂಧರ್ವಾಣಾಮ್ ಚಿತ್ರರಥಃ ಸಿದ್ಧಾನಾಮ್ ಕಪಿಲಃ ಮುನಿಃ
– ಎಲ್ಲ ಮರಗಳಲ್ಲಿ ಅರಳಿಮರ ನಾನು.[ಅಶ್ವ=ಕುದುರೆಯ ರೂಪದಲ್ಲಿ ಸ್ಥ=ಇದ್ದುದರಿಂದ, ‘ಅಶ್ವತ್ಥ’ ಎನಿಸಿ ಅರಳಿಮರದಲ್ಲಿದ್ದೇನೆ.]



 ದೇವಲೋಕದ ಋಶಿಗಳಲ್ಲಿ ನಾರದ ನಾನು. [ನಾರ=ನರರ ಬಯಕೆಯೆಲ್ಲವನ್ನು ದ=ಕೊಡುವವನಾಗಿ ‘ನಾರದ’ ಎನ್ನಿಸಿ ನಾರದನಲ್ಲಿದ್ದೇನೆ.] ಗಂಧರ್ವರ ದೊರೆ ಚಿತ್ರರಥ ನಾನು. [ಚಿತ್ರ=ಅಚ್ಚರಿಯ, ರಥ=ತೇರಿನಲ್ಲಿ ಚರಿಸುವುದರಿಂದ ‘ಚಿತ್ರರಥ’ ಎನ್ನಿಸಿ ಗಂದರ್ವ ರಾಜ ಚಿತ್ರರಥನಲ್ಲಿದ್ದೇನೆ.] ಯೋಗಸಿದ್ಧರಲ್ಲಿ[ಕ=ಸುಖರೂಪನಾಗಿ, ಪಿ=ಪಾಲಿಸುವುದರಿಂದ, ಮತ್ತು ಲ=ಲಯಗೊಳಿಸುವುದರಿಂದ] ಕಪಿಲ ಮುನಿ ನಾನು.

ಕೃಷ್ಣ ಹೇಳುತ್ತಾನೆ: “ಸರ್ವ ವೃಕ್ಷಗಳಲ್ಲಿ  ಅಶ್ವತ್ಥ ನಾನು” ಎಂದು. ಅಶ್ವತ್ಥಮರ ಇಂದು ಮೇಲ್ನೋಟದಲ್ಲಿ ನೋಡುವವರಿಗೆ ಯಾವುದಕ್ಕೂ ಉಪಯೋಗವಿಲ್ಲದ ಮರ.

ಭಗವಂತ ಈ ಮರಕ್ಕೆ ಮಹತ್ವ ಕೊಟ್ಟು ಹೇಳದಿದ್ದರೆ ಈ ಮರದ ಬಗ್ಗೆ ನಮಗೆ ಏನೂ ತಿಳಿದಿರುತ್ತಿರಲಿಲ್ಲ. ಏಕೆಂದರೆ ಈ ಮರ ನಮಗೆ ತಿನ್ನುವ ಹಣ್ಣನ್ನಾಗಲಿ, ಸುಗಂಧವಾದ ಹೂವನ್ನಾಗಲಿ ಕೊಡುವುದಿಲ್ಲ. ಈ ಮರದಿಂದ ಪೀಠೊಪಕರಣ ಮಾಡಲು ಸಾಧ್ಯವಿಲ್ಲ.

ವಿಶಾಲವಾಗಿ ಬೆಳೆದು ತನ್ನ ಸುತ್ತಲಿನ ಪ್ರದೇಶವನ್ನು ಆಕ್ರಮಿಸಿ ನಿಲ್ಲುವ ಈ ಮರ, ಮೇಲ್ನೋಟಕ್ಕೆ ಜನರಿಗೆ ಕಾಟ ಕೊಡುವ ಮರ! ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ “ವೃಕ್ಷಗಳ ಸಮುದಾಯದಲ್ಲಿ ಶ್ರೇಷ್ಠ ವೃಕ್ಷ ಅಶ್ವತ್ಥ” ಎಂದು.

ಏಕೆ  ಈ ಮರಕ್ಕೆ ಇಷ್ಟು ಪ್ರಾಧಾನ್ಯ ಎನ್ನುವುದು ತಿಳಿಯದೆ ಇಂದು ನಾವು ಅದನ್ನು ಪೂಜಿಸುತ್ತೇವೆ ಅಥವಾ ಇನ್ನು ಕೆಲವರು ನಿರ್ಲಕ್ಷಿಸುತ್ತಾರೆ. ಈ ಮರವನ್ನು ನೆಟ್ಟರೆ ಪುಣ್ಯ ಬರುತ್ತದೆ ಎನ್ನುವ ಕಾರಣಕ್ಕೆ ಮನೆಯಿಂದ ದೂರದಲ್ಲಿ ಎಲ್ಲೋ ದೇವಸ್ಥಾನದಲ್ಲಿ ಅರಳಿ ಮರ ನೆಡುವುವವರಿದ್ದಾರೆ.

ಇಂದು ಈ ಮರದ ಮಹತ್ವ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನವರು ಆಲ, ಅರಳಿ ಮತ್ತು ಅತ್ತಿ ಈ ಮೂರು ಮರಗಳಿಗೆ ಬಹಳ ಮಹತ್ವ ಕೊಟ್ಟರು. [ಬೇಂದ್ರೆಯವರು ತಮ್ಮ ತೋಟದಲ್ಲಿ ಮೂಡಿಬಂದ ಈ ಮೂರು ಗಿಡಗಳನ್ನು ನೋಡಿ- “ನಮ್ಮ ತೋಟದಲ್ಲಿ ಭಗವಂತ ಮೂರು ರೂಪದಲ್ಲಿ ಬಂದಿದ್ದಾನೆ” ಎಂದು ಹೃದಯತುಂಬಿ ಹೇಳಿದ್ದನ್ನು ಇಲ್ಲಿ ಬನ್ನಂಜೆಯವರು ನೆನಪಿಸಿಕೊಂಡಿದ್ದಾರೆ]. 

 ಹಿಂದೆ ಯಜ್ಞ ಮಾಡುವಾಗ ಶಮಿ ಮತ್ತು ಅರಣಿ(ಅರಳಿ) ಸಮಿತೆಯನ್ನು ಮಥನ ಮಾಡಿ ಅದರಿಂದ ಅಗ್ನಿ ಕಿಡಿ ತರಿಸಿ, ಅಗ್ನಿ ಸೃಷ್ಟಿ ಮಾಡುತ್ತಿದ್ದರು. ಯಜ್ಞದಲ್ಲಿ ಅರಳಿಯ ಸಮಿತೆಯನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ.

ಅಶ್ವತ್ಥಮರದ ಸಮಿತೆಯನ್ನು ಕಾಷ್ಟವಾಗಿ ಯಜ್ಞದಲ್ಲಿ ಉಪಯೋಗಿಸಿದರೆ, ಅಲ್ಲಿ ಉರಿಯುವ ಬೆಂಕಿಯ ಜ್ವಾಲೆಯಲ್ಲಿ ಒಂದು ವಿಶಿಷ್ಠ ಶಕ್ತಿ ಹೊರ ಹೊಮ್ಮುತ್ತದೆ. ಹೇಗೆ ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆಯೋ ಹಾಗೆ ಅಗ್ನಿಯಲ್ಲಿ ಏಳು ಬಣ್ಣವಿದೆ. ಮುಂಡಕ ಉಪನಿಷತ್ತಿನಲ್ಲಿ ಅಗ್ನಿಯ ಜ್ವಾಲೆಯಿಂದ ಹೊಮ್ಮುವ ಏಳು ಬಣ್ಣವನ್ನು ಕಾಳಿ, ಕರಾಳಿ, ಮನೋಜವಾಚ, ಸುಲೋಹಿತಾಯಾಚ, ಸುಧೂಮ್ರವರ್ಣಾ, ಸ್ಫುಲಿಂಗಿನೀ, ವಿಶ್ವರುಚಿ ಎಂದು ಕರೆದಿದ್ದಾರೆ.

ಅಗ್ನಿಯ ಈ ಏಳು ಬಣ್ಣವನ್ನು ಸೂರ್ಯ ಕಿರಣದ ಏಳು ಬಣ್ಣದೊಂದಿಗೆ ಸಂಕ್ರಾಂತಗೊಳಿಸಿ ವಾತಾವರಣದಲ್ಲಿ ಅದರ ಪ್ರಭಾವ ತರುವುದೇ ಯಜ್ಞ. ಈ ಕ್ರಿಯೆಗೆ ಅಶ್ವತ್ಥಸಮಿತೆ ಒಂದು ಪ್ರಮುಖ ಸಾಧನ.

ಇಂದು ಹಲವರು ಅಶ್ವತ್ಥಮರದಲ್ಲಿ ದೇವತಾ ಸನ್ನಿಧಾನವಿದೆ ಎಂದು ಅದಕ್ಕೆ ಪ್ರದಕ್ಷಿಣೆ ಬರುತ್ತಾರೆ. ಮಕ್ಕಳಾಗದಿದ್ದಾಗ ಜೋತಿಷಿಗಳು ಅಶ್ವತ್ಥ ಪ್ರದಕ್ಷಿಣೆ ಬರುವಂತೆ ಹೇಳುತ್ತಾರೆ.

ಇದು ಏಕೆ ಎನ್ನುವ ಕಲ್ಪನೆ ಇಲ್ಲದ ಜನ ಇದೆಲ್ಲವೂ ಮೂಢನಂಬಿಕೆ ಎಂದು ಮಾತನಾಡಿಕೊಳ್ಳುತ್ತಾರೆ. ಜಗತ್ತಿನಲ್ಲಿರುವ ಎಲ್ಲ ಮರಗಳಿಗಿಂತ ಹೆಚ್ಚು ಆಮ್ಲಜನಕ ಕೊಡುವ ವೃಕ್ಷ ಅಶ್ವತ್ಥ.

ಇಂತಹ ಶುದ್ಧ ವಾಯುವಿನ ಉಸಿರಾಟದಿಂದ ಗರ್ಭದೋಷ ಸರಿಹೋಗುವ ಸಾಧ್ಯತೆ ಇದೆ ಎಂದು ಇಂದು ವಿಜ್ಞಾನ ಕೂಡ ಒಪ್ಪಿಕೊಂಡಿದೆ.

ಹಿಂದಿನ ಕಾಲದಲ್ಲಿ ಋಷಿಗಳು ಅಶ್ವತ್ಥ ಮರದ ಬುಡದಲ್ಲಿ ಕುಳಿತು ವೇದಾಧ್ಯಾಯನ ಮಾಡುತ್ತಿದ್ದರು. ಹೀಗೆ ಅಶ್ವತ್ಥ ಮರದಲ್ಲಿ ಭಗವಂತನ ವಿಶೇಷ ವಿಭೂತಿ ಆ ಮರಕ್ಕೆ ಇಂಥಹ ಅನೇಕ ವಿಶೇಷ ಶಕ್ತಿಯನ್ನು ಕೊಟ್ಟಿದೆ.

ಇಲ್ಲಿ ಬಂದಿರುವ ಭಗವಂತನ ನಾಮ ‘ಅಶ್ವತ್ಥಃ’. ವೇದವನ್ನು ಉಪದೇಶ ಮಾಡಿದ ಭಗವಂತನ ವಿಶೇಷ ಅವತಾರ ಅಶ್ವರೂಪ ಹಯಗ್ರೀವ. ಅಶ್ವದ ಹಾಗೆ ಇದ್ದು ವೇದೋಪದೇಶ ಮಾಡಿದ ಭಗವಂತನನ್ನು ‘ಅಶ್ವತ್ಥಃ’ ಎಂದು ಕರೆಯುತ್ತಾರೆ.

-- ಸಂಗ್ರಹಿಸಿದ ಮಾಹಿತಿ

Wednesday, January 23, 2019

ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ

ಭೋಜನ ಕಾಲದಲ್ಲಿ ಬಡಿಸಲಾಗುವ ಪದಾರ್ಥಗಳು ಮತ್ತು ಅವುಗಳ ಭಗವದ್ರೂಪಗಳ ಪರಿಚಯ.

ಬಡಿಸುವ ಕ್ರಮಾನುಸಾರವಾಗಿ ಭಗವಂತನ ೨೪ ನಾಮಗಳನ್ನು ಅನುಕ್ರಮವಾಗಿ ನೀಡಲಾಗಿದ್ದು ಇದೇ ಕ್ರಮವನ್ನು ಸಾಮಾನ್ಯವಾಗಿ ಅನುಸರಿಸಲಾಗುತ್ತದೆ.

1 ಉಪ್ಪು (ಸೌಗಂಧಿ ಸಹಿತ ಜನಾರ್ಧನ)
2 ಚಟ್ನಿ, ಕೋಸಂಬರಿ, ಮುಂತಾದುವು (ಸತ್ಯ ಸಹಿತ ಪ್ರದ್ಯುಮ್ನ)
3 ಕೊಬ್ಬರಿ ಬಳಸಿರುವ ಪಲ್ಯ (ಬುದ್ಧಿಸಹಿತ ಪದ್ಮನಾಭ)
4 ಸೊಪ್ಪು ಬಳಸಿರುವ ಪಲ್ಯಗಳು (ಮಂಗಳಾದೇವಿ ಸಹಿತ ಹೃಶೀಕೇಷ)
5 ಹುಳಿರಹಿತ ಪದಾರ್ಥಗಳು (ಹರಿಣಿ ಸಹಿತ ಸಂಕರ್ಷಣ)
6 ಕಟು ಅಥವಾ ಕಹಿ ಪದಾರ್ಥಗಳು (ನಿತ್ಯ ಸಹಿತ ಅನಿರುದ್ಧ)
7 ಹುಳಿ ಪದಾರ್ಥಗಳು (ಇಂದಿರಾ ಸಹಿತ ದಾಮೋದರ)
8 ಭಕ್ಷ್ಯ ಅಥವಾ ಸಿಹಿ ಪದಾರ್ಥಗಳು (ಕಮಲಾ ಸಹಿತ ಯಾಧವ)
9 ಹೋಳಿಗೆ (ಕಮಲಾಲಯ ಮಧುಸೂದನ)
10 ಗೊಜ್ಜು ಮತ್ತು ಕರಿದ ಪದಾರ್ಥಗಳು (ಸದಾಶ್ರಯ ಆಧೊಷಜ)
11 ಜಹಾಂಗೀರು, ವಡೆ ಮುಂತಾದ ಉದ್ದು ಬಳಸಿರುವ ಪದಾರ್ಥಗಳು (ಸಖಾದೇವಿ ಸಹಿತ ಆಚ್ಯುತ)
12 ಕುಂಬಳಕಾಯಿ, ಎಳ್ಳು, ಉದ್ದಿನ ಪದಾರ್ಥಗಳು-ಹಪ್ಪಳ ಸಂಡಿಗೆ ಮುಂತಾದುವು (ಲಕ್ಷ್ಮೀ ಸರಸಿಂಹ)
13 ಹಣ್ಣು ಮತ್ತು ಪಾನಕಗಳು (ಸುಂದರಿ ಸಹಿತ ಉಪೇಂದ್ರ)
14 ತೊವ್ವೆ (ಧಾನ್ಯ ಸಹಿತ ಶ್ರೀಧರ)
15 ಪರಮಾನ್ನ -ಪಾಯಸ (ಲಕ್ಷ್ಮೀ ಸಹಿತ ನಾರಾಯಣ)
16 ಅನ್ನ (ಶ್ರೀಕೇಶವ)
17 ತುಪ್ಪ (ಪದ್ಮಾ ಸಹಿತ ಗೋವಿಂದ)
18 ಬೆಣ್ಣೆ (ರಮಾ ಸಹಿತ ತ್ರಿವಿಕ್ರಮ)
19 ಹಾಲು / ಕ್ಷೀರ (ಪದ್ಮಿನೀ ಸಹಿತ ಗೋವಿಂದ)
20 ಮೊಸರು (ವೃಕ್ಷಾಕಪಿ ಸಹಿತ ವಾಮನ)
21 ಕುಡಿಯುವ ನೀರು (ಶ್ರೀಕೃಷ್ಣ)
22 ಸಕ್ಕರೆ, ಬೇಳೆ (ದಕ್ಷಿಣಾ ಸಹಿತ ವಾಸುದೇವ)
23 ಶ್ಯಾವಿಗೆ, ಇಂಗು, ಏಲಕ್ಕಿ, ಕೇಸರಿ, ಕರ್ಪೂರ, ಜೀರಿಗೆ, ಮುಂತಾದುವು (ಆನಂದ ಸಹಿತ ಪುರುಷೋತ್ತಮ)
24 ವೀಳ್ಯದೆಲೆ (ಶ್ರೀಹರಿ)
25 ಪಾನಕ - ನಿಂಬೆ (ವಿಶ್ವ)

ವಿಷಯಸೂಚಿ :
1. ಕೆಲವು ಸಂಪ್ರದಾಯಗಳಲ್ಲಿ ತುಪ್ಪವನ್ನು ಭೋಜನಾರಂಭಕ್ಕೆ ಮುಂಚಿತವಾಗಿ ಬಡಿಸುವುದು ರೂಢಿಯಲ್ಲಿದೆ. ಈ ಕ್ರಮವನ್ನು ಪಾತ್ರಾಭಿಗಾರ ಎನ್ನುತ್ತಾರೆ.
2. ಬಡಿಸುವವರು ಭೋಜನ ಮಾಡುವವರ ಎದುರಿನಿಂದ ಬಡಿಸಬೇಕು.

ಗ್ರಂಥಋಣ:
1. ಜಗನ್ನಾಥದಾಸರ ಹರಿಕಥಾಮೃತಸಾರ – ಸರ್ವಪ್ರತೀಕ ಸಂಧಿಯಿಂದ ಆಯ್ದು, ಶ್ರೀ ಸಂಜೀವ ಮೂರ್ತಿದಾಸರು ಪ್ರಸ್ತುತ ಪಡಿಸಿದ ಪ್ರವಚನ.
2. ಶ್ರೀಅಪ್ಪಣ್ಣಾಚಾರ್ಯರ ನೇತೃತ್ವದಲ್ಲಿ ಟಿಟಿಡಿ ಪ್ರಕಾಶಿಸಿದ “ಹರಿ ಭಜನೆ ಮಾಡೋ ನಿತಂತರ” ಪುಸ್ತಕ.
3. ಎಂ.ಕೃಷ್ಣರಾಯ “ಶ್ರೀ ಹರಿಕಥಾಮೃತಸಾರ ಸೌರಭ”.
4. ಶ್ರೀ ಮುರುಗೋಡು ದಾಸರ “ಭಜನ ಚಂದ್ರಿಕಾ”.

ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿ

ಶ್ರೀರಾಘವೇಂದ್ರ ಸ್ವಾಮಿಗಳ ಪವಾಡಗಳು.

ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಅನೇಕ ವಿದ್ದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.

ಅವರಲ್ಲೊಬ್ಬ ಬಡ ವಿದ್ದ್ಯಾರ್ಥಿ ತನ್ನ ವಿದ್ಯಾಭ್ಯಾಸ ಮುಗಿಸಿ ಹೊರಡುವಾಗ ರಾಯರಲ್ಲಿ ಬಂದು, ತನ್ನ ಬಡತನದ ಕಷ್ಟವನ್ನು ಅವರ ಬಳಿ ತೋಡಿಕೊಂಡು ತನ್ನನ್ನು ಅನುಗ್ರಹಿಸಬೇಕೆಂದು ಕೇಳಿಕೊಂಡನು.

ಸ್ನಾನದ ಸಮಯದಲ್ಲಿದ್ದ ರಾಯರು ತಮ್ಮ ಬಳಿ ಕೊಡಲು ಏನೂ ಇಲ್ಲವೆಂದರು. ಆಗ ತಾವು ಏನು ಕೊಟ್ಟರು ನನಗೆ ಮಹಾ ಪ್ರಸಾದವೆಂದು ಒಂದು ಹಿಡಿ ಮಂತ್ರಾಕ್ಷತೆಯನ್ನದರು ತಮ್ಮ ಕೈಯಿಂದ ದಯಪಾಲಿಸಬೇಕೆಂದು ಭಕ್ತಿಯಿಂದ ಬೇಡಿದನು.

ಅದಕ್ಕವರು ಅವನಿಗೆ ಮಂತ್ರಾಕ್ಷತೆ ಕೊಟ್ಟರು. ಮಂತ್ರಾಕ್ಷತೆಯನ್ನೆ ವಿದ್ದ್ಯಾರ್ಥಿಯು ಮಹಾ ಪ್ರಸಾದ ವೆಂದು ಸ್ವೀಕರಿಸಿ ತನ್ನ ಊರಿನ ಕಡೆಗೆ ಹೊರಟನು.

ದಾರಿಯಲ್ಲಿ ಕತ್ತಲಾಗಿದ್ದರಿಂದ ಒಂದು ಮನೆಯ ಜಗಲಿಯ ಮೇಲೆ ಮನೆಮಾಲಿಕರಲ್ಲಿ ಅಪ್ಪಣೆ ಪಡೆದು ಮಲಗಿದನು. ಆ ಸಮಯದಲ್ಲಿ ಮನೆಯ ಮಾಲಿಕನ ಹೆಂಡತಿ ಗರ್ಭಿಣಿಯಾಗಿದ್ದಳು.

ಮಧ್ಯರಾತ್ರಿಯಲ್ಲಿ ಒಂದು ಪಿಶಾಚಿಯು ಆ ಮನೆಯೊಳಗೆ ಹೋಗಿ, ಹುಟ್ಟಲಿರುವ ಮಗುವನ್ನು ಕೊಲ್ಲಬೇಕೆಂದು ಅಲ್ಲಿಗೆ ಬಂದಿತು. ಆದರೆ ಜಗಲಿಯಲ್ಲಿ ಮಲಗಿದ ಭಕ್ತನ ಬಳಿಯಿರುವ ಮಂತ್ರಾಕ್ಷತೆ ದಾಟಲು ಪ್ರಯತ್ನಿಸಿದಾಗ ಮಂತ್ರಾಕ್ಷತೆ ಬೆಂಕಿಯಂತೆ ಕಂಡು ಬಂದಿತು.

 ಇದರಿಂದ ಗಾಬರಿಗೊಂಡ ಪಿಶಾಚಿಯು ಭಕ್ತನನ್ನು ನೋಡಿ ಮಂತ್ರಾಕ್ಷತೆ ದೂರ ಎಸೆಯಲು ಹೇಳಿತು. ಪಿಶಾಚಿಯನ್ನು ನೋಡಿ ಹೆದರಿದ ಭಕ್ತನು ಮಂತ್ರಾಕ್ಷತೆಯನ್ನು ಅದರ ಮೇಲೆ ಎಸೆದನು. ಮಂತ್ರಾಕ್ಷತೆಯ ಪ್ರಭಾವದಿಂದ ಪಿಶಾಚಿಯು ಚೀರುತ್ತಾ ಅಲ್ಲೆ ಸುಟ್ಟು ಬೂದಿಯಾಯಿತು.

ಅದರ ಚೀತ್ಕಾರವನ್ನು ಕೇಳಿದ ಮನೆ ಮಂದಿಯಲ್ಲ ಹೊರಗೆ ಬಂದು ಅವಕ್ಕಾದರು. ಅಷ್ಟರಲ್ಲೆ ಮನೆಯೊಡತಿಗೆ ಮಗುವಾದ ಸಂತಸದ ಸುದ್ದಿ ತಿಳಿಯಿತು.


ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಷ್ಟ ಶಕ್ತಿಯ ನಾಶವಾಯಿತು

ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು !

ಓಂ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋಃ ನಮಃ ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣರೇ ಮೊದಲಾದ ಗುರು...